ಸುದ್ದಿವಿಜಯ,ಜಗಳೂರು:
ಡಾ.ಟಿ.ಜಿ.ರವಿಕುಮಾರ್
ಲೇಖಕ, ಬರಹಗಾರ, ಬೇಸಾಯಗಾರ, ವೈಜ್ಞಾನಿಕ ಚಿಂತಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಆಡುಮುಟ್ಟದ ಸೊಪ್ಪಿಲ್ಲ, ಪೂರ್ಣಚಂದ್ರ ತೇಜಸ್ವಿ ತಿಳಿಯದ ವಿಷಯವಿಲ್ಲ. ಅವರ ಬದುಕೇ ಒಂದು ರೋಚಕ.
ಅವರ ಕುರಿತು ಬರೆಯಲು ಸಾಕಷ್ಟು ವಿಷಯ ವಸ್ತುಗಳಿವೆ. ಅವರೊಂದಿಗೆ ನಾನು ಮಾತನಾಡಿದ್ದೇನೆ ಎನ್ನುವ ಖುಷಿಯಿಂದಲೇ ಅವರ ನೆನಪು ಸದಾ ನನ್ನ ಚಿತ್ತ ಬಿತ್ತಿಯಲ್ಲಿ ರಿಂಗಣಿಸುತ್ತದೆ.
“ನಾವೆಲ್ಲ ಕೈಗೆ ವಾಚ್ ಕಟ್ಟಿಕೊಳ್ಳುತ್ತೇವೆ. ದಿನವೂ ಏಳುತ್ತಿದ್ದಂತೆಯೇ ಗಂಟೆ ನೋಡಿಕೊಳ್ಳುತ್ತಾ ನಮ್ಮ ದಿನವನ್ನು ಆರಂಭಿಸುತ್ತೇವೆ.
ಹಣ ಸಂಪಾದಿಸುತ್ತೇವೆ. ಆಸ್ತಿಯನ್ನು ಸಂಪಾದಿಸಸುತ್ತೇವೆ. ಆದರೆ ಕಳೆದುಹೋಗುತ್ತಿರುವ ಕಾಲವನ್ನು ಮಾತ್ರ ಎಂದೆಂದೂ ಸಂಪಾದಿಸಲು ಸಾಧ್ಯವಿಲ್ಲ. ಪ್ರತಿ ಕ್ಷಣವನ್ನೂ ಜೀವಿಸಿ”
ದೇಶ-ವಿದೇಶ ಪುಸ್ತಕದಲ್ಲಿ ನಾಲ್ಕೇ ಸಾಲಲ್ಲಿ ಪೂಚಂತೇ ಬರೆದಿರುವ ಬದುಕಿಗೆ ಪಾಠವಾಗಬಲ್ಲ ಸಾಲುಗಳಿವು.
ಯಾರನ್ನೂ ತಿದ್ದದ್ದೇ, ಅನಾವಶ್ಯಕ ಮುದ್ದು ಮಾಡದೇ, ತಮ್ಮ ಹೃದಯದಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರ ರೂಪಕೊಟ್ಟವರು ಪೂಚಂತೆ.
ಅವರ ಬದುಕಿನ ಪ್ರತಿ ಕ್ಷಣಗಳಿಗೂ ಜೀವಂತಿಕೆ ಇತ್ತು, ಸಾರ್ಥಕತೆಯಿತ್ತು.
ಮೊಗ್ಗೊಂದು ಮೂಡಿ, ಹೂವಾಗಿ ಅರಳಿ, ತನ್ನ ಇರುವಿಕೆಯಿಂದ ಸುತ್ತೆಲ್ಲ ಘಮವನ್ನು ಸೂಸಿ, ಕೊನೆಗೆ ಸದ್ದೇ ಆಗದಂತೆ ಧರೆಗುರಿಳಿ ಹೋಗುವಷ್ಟೇ ಸಾರ್ಥಕ ಬದುಕು ಪೂಚಂತೇ ಅವರದ್ದು.
ಇಂತಹ ನೂರೆಂಟು ಕಾರಣಗಳಿಂದಾಗಿ ಪೂರ್ಣಚಂದ್ರ ತೇಜಸ್ವಿ ನನ್ನ ಮನದಂಗಳದಲ್ಲಿ ಪೂರ್ಣಚಂದ್ರನಂತೆ ಮೂಡಿದ್ದರು. ಅವರ ಬರಹಗಳನ್ನು ಓದುವಾಗ ಅವರೊಂದಿಗೆ ಜೀವಿಸಿದ್ದೇವೆ ಎಂಬ ಭಾವ ಉಂಟಾಗಿದ್ದರೂ ಅವರನ್ನೊಮ್ಮೆ ಮುಖತಃ ಭೇಟಿಯಾಗಬೇಕು ಎಂಬ ಹಂಬಲದಲ್ಲಿ 2007ರ ಏಪ್ರಿಲ್ 2ರಂದು ದೂರವಾಣಿ ಕರೆ ಮಾಡಿದ್ದೆ.
ಫೋನ್ ರಿಸೀವರ್ ಎತ್ತಿಕೊಂಡವರ ದನಿ, ‘ಹಲೋ, ಹೇಳಿ’ ಎಂದಾಗಲೇ ಅದು ಪೂಚಂತೇ ಅವರೇ ಎಂಬ ಪುಳಕ, ಸಣ್ಣ ಕರೆಂಟ್ ನನ್ನೊಳಗೆ ಪಾಸಾಗಿತ್ತು.
ಆದರೂ ಸಾವರಿಸಿಕೊಂಡು, ಸಾರ್ ನಾನು ಡಾ.ರವಿ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸರ್ಜನ್. ನಾನು, ನನ್ನ ಪತ್ನಿ ನಿಮ್ಮ ಬರಹಗಳಿಂದ ಬಹಳ ಪ್ರಭಾವಿತರಾಗಿದ್ದೇವೆ.
ನಿಮ್ಮನ್ನು ನೋಡಲು ಮೂಡಿಗೆರೆಗೆ ಬರಬೇಕು ಎಂದುಕೊಂಡಿದ್ದೇವೆ. ಕಾಣಲು ಅವಕಾಶ ಕೊಡ್ತೀರ? ಎಂದು ಒಂದೇ ಉಸಿರಿನಲ್ಲಿ ಹೇಳಿದೆ.
ನೋಡೋದಕ್ಕೆ ನಾನೇನು ಟೂರಿಸ್ಟ್ ಅಟ್ರಾಕ್ಷನ್ ಏನ್ರೀ? ಎಂಬ ಹಾಸ್ಯ ಮಿಶ್ರಿತ ತೇಜಸ್ವಿಯವರ ಉತ್ತರದಲ್ಲಿ ನಿರಾಕರಣೆ ಖಂಡಿತ ಇರಲಿಲ್ಲ.
ನಾನು ಮುಂದುವರಿದು, ತೇಜಸ್ವಿಯವರು ತುಂಬಾ ಮೂಡಿಯಂತೆ, ಭೇಟಿಯಾಗಲು ಹೋದವರನ್ನು ಬೈದು ಕಳುಹಿಸುತ್ತಾರಂತೆ ಎಂದು ನನ್ನ ಹೆಂಡತಿಗೆ ಹೇಳಿದ್ದೇನೆ.
ಅದಕ್ಕೆ ಆಕೆ, ‘ತೇಜಸ್ವಿಯವರಿಂದ ಬೈಯಿಸಿಕೊಂಡು ಬರುವ ಪುಣ್ಯವಾದರೂ ಸಿಗಲಿ, ಮೂಡಿಗೆರೆಗೆ ಹೋಗಿ ಬರೋಣ’ ಎನ್ನುತ್ತಿದ್ದಾಳೆ ಸರ್ ಎಂದೆ. ಅದಕ್ಕವರು ಜೋರಾಗಿ ನಕ್ಕು 8ನೇ ತಾರೀಖಿನ ನಂತರ ಬನ್ನಿ ಎಂದರು. 13ನೇ ತಾರೀಖಿಗೆ ಬರುವುದಾಗಿ ಅನುಮತಿ ಪಡೆದು, ಹಿರಿಹಿರಿ ಹಿಗ್ಗಿದ್ದೆ.
ಆದರೆ, ಏಪ್ರಿಲ್ 5ರಂದು ಮೂಡಿಗೆರೆಯ ತಮ್ಮ ಮನೆ ನಿರುತ್ತರ ದ ಪ್ರಾಂಗಣದಲ್ಲೇ ಕುಸಿದು ಪೂಚಂತೇ ಕಾಲವಾದರು ಎಂಬ ಸುದ್ದಿ ಸಿಡಿಲಿನಂತೆ ಎರಗಿತ್ತು. ಅವರನ್ನು ಭೇಟಿಯಾದಾಗ ನೂರೆಂಟು ಪ್ರಶ್ನೆಗಳನ್ನು ಕೇಳಬೇಕು ಎಂದುಕೊಂಡಿದ್ದ ನನಗೆ ಆದ ಆಘಾತ ಅಷ್ಟಿಷ್ಟಲ್ಲ.
ಜೀವಂತವಾಗಿ ದರ್ಶನ ಭಾಗ್ಯವಿಲ್ಲದಿದ್ದರೂ ಅಂತಿಮ ದರ್ಶನ ಪಡೆಯೋಣ ಎಂದು ಏಪ್ರಿಲ್ 6ರಂದು ಕುಪ್ಪಳಿಯ ಅವರ ಅಂತಿಮ ಸಂಸ್ಕಾರ ಸ್ಥಳಕ್ಕೆ ತಲುಪಿದೆ.
ಪ್ರಕೃತಿ ಒಬ್ಬೊಬ್ಬರಿಗೂ ಒಂದೊಂದು ಪ್ರಶ್ನೆ, ಉತ್ತರ, ಒಳಹು, ಹುರುಪು, ಆತ್ಮೀಯತೆ, ಸಾಂಗತ್ಯ, ಸಾಂತ್ವನ, ಸಾಮಿಪ್ಯ ನೀಡುತ್ತದೆ. ನನ್ನ ಉತ್ತರಗಳಿಗಿಂತ ಪ್ರಕೃತಿಯಿಂದಲೇ ಉತ್ತರ ಪಡೆ. ಇದಕ್ಕೆ ನೀನು ಮಾಡಬೇಕಾದ್ದಿಷ್ಟೇ, ನಿಸರ್ಗವನ್ನು ಪ್ರೀತಿಸು, ಸಂರಕ್ಷಿಸು ಎಂಬ ಭಾವ ಸಂದೇಶವು ಪೂಚಂತೇಯವರ ನಿಶ್ಚಲ ದೇಹದ ಮುಂದೆ ನಿಂತಿದ್ದ ನನಗೆ ಕೇಳಿದಂತಾಯ್ತು.
ಆ ಕ್ಷಣಕ್ಕೂ ಮೊದಲಿನಿಂದಲೂ ನನ್ನೊಳಗಿದ್ದ ಪ್ರಕೃತಿ ಪ್ರೇಮ, ಜಾಗೃತಿ, ಹೋರಾಟ, ಸಂರಕ್ಷಣೆಯ ಮನಸ್ಸಿಗೆ ಪೂಚಂತೇ ದರ್ಶನದಿಂದ ನೂರೆಂಟು ವಿಧದಲ್ಲಿ ನನ್ನೊಳಗೆ ಬಲಗೊಂಡಿತು.
ನಮ್ಮಿಂದ ಏನೊಂದನ್ನೂ ಬಯಸದೇ ಭೂಮಿಯು ನಮಗೆಲ್ಲವನ್ನೂ ನೀಡುತ್ತಿದೆ. ಭೂಮಿಯ ಈ ಅಕ್ಷಯ ಗುಣವನ್ನು ನಾವೆಲ್ಲರೂ ತಪ್ಪಾಗಿ ಭಾವಿಸಿ, ಅತಿರೇಕದಿಂದ ವರ್ತನೆ ಮಾಡುತ್ತಿದ್ದೇವೆ.
ಶತಮಾನಗಳ ಭೀಕರ ವರ್ತನೆಗೆ ಭೂತಾಯಿ ಹತ್ತೇ ಸೆಕೆಂಡಿನ ಶಿಕ್ಷೆ(ಭೂಕಂಪ, ಸುನಾಮಿ) ನೀಡಿದರೂ ಮನುಕುಲವೇ ನಾಶವಾಗುವುದು ಖಚಿತ.
ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಪ್ರಕೃತಿಯನ್ನು ಉಳಿಸುವ, ಬೆಳೆಸುವ ಕೈಂಕರ್ಯದಲ್ಲಿ ಎಲ್ಲರೂ ಜತೆಯಾಗೋಣ.
ಇದುವೇ ಪೂರ್ಣಚಂದ್ರ ತೇಜಸ್ವಿ ಅವರಿಗೆ ನಾವು ನೀಡಬಹುದಾದ ಗೌರವ ಮತ್ತು ಶ್ರದ್ಧಾಂಜಲಿ. ಏನಂತೀರಿ?
*
ಪೂಚಂತೇ ಪ್ರವರ
* ರಾಷ್ಟ್ರಕವಿ ಕುವೆಂಪು-ಹೇಮಾವತಿಯವರ ಮೊದಲನೆಯ ಪುತ್ರ.
* ಪತ್ನಿ: ರಾಜೇಶ್ವರಿ ತೇಜಸ್ವಿ
* ಮಕ್ಕಳು: ಸುಸ್ಮಿತಾ ಮತ್ತು ಈಶಾನ್ಯೆ
* ಸಹೋದರ: ಕೋಕಿಲೋದಯ ಚೈತ್ರ
* ಸಹೋದರಿಯರು: ಇಂದುಕಲಾ ಮತ್ತು ತಾರಿಣಿ
* ಪ್ರಭಾವ ಬೀರಿದವರು: ಕುವೆಂಪು, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ
* ವೃತ್ತಿ: ಕೃಷಿಕ, ಲೇಖಕ, ಪುಸ್ತಕ ಪ್ರಕಾಶಕ, ಛಾಯಚಿತ್ರಗಾರ
* ಸಾಹಿತ್ಯ ಪ್ರಕಾರ: ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ,
ವಿಜ್ಞಾನ-ವಿಷಯ, ವಿಜ್ಞಾನ ಸಾಹಿತ್ಯ ಚಿತ್ರ ಲೇಖನ, ಅನುವಾದಗಳು.
(ಲೇಖಕರು ಮುಖ್ಯಸ್ಥರು
ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ದಾವಣಗೆರೆ)